ಹೆಮ್ಮಿಗೆ ಶ್ರೀನಿವಾಸರಂಗಾಚಾರ್ ಬಿಳಿಗಿರಿ ಅವರು ಪ್ರಸಿದ್ಧ
ಭಾಷಾಶಾಸ್ತ್ರಜ್ಞರೂ ಸೃಜನಶೀಲ ಲೇಖಕರೂ ಆಗಿದ್ದರು. ಪ್ರಾಚೀನ ಕನ್ನಡ ವ್ಯಾಕರಣ, ಭಾಷಾಶಾಸ್ತ್ರ ಮತ್ತು
ಛಂದಸ್ಸುಗಳಲ್ಲಿ ಬಿಳಿಗಿರಿಯವರು ಉಪಯುಕ್ತವಾದ ಕೊಡುಗೆ ನೀಡಿದ್ದಾರೆ. ಅವರ ತಾಯಿ-ತಂದೆಯರು ಶಿವಮೊಗ್ಗ
ಜಿಲ್ಲೆಯ ಭದ್ರಾವತಿಯವರು. ಸುಮಾರು ನಾಲ್ಕು ವರ್ಷಗಳ ಕಾಲ ಇಂಜಿನಿಯರಿಂಗ್ ಪದವಿಗಾಗಿ ಅಭ್ಯಾಸ ಮಾಡಿದ,
ಬಿಳಿಗಿರಿಯವರು, ಪದವಿ ಪಡೆಯುವ ಮೊದಲೇ ತಮ್ಮ ಆಸಕ್ತಿಯನ್ನು ಕನ್ನಡ
ಸಾಹಿತ್ಯದ ಕಡೆಗೆ ಬದಲಿಸಿಕೊಂಡರು. ಮೈಸೂರು ವಿಶ್ವವಿದ್ಯಾಲಯದಿಂದ, ಕನ್ನಡದಲ್ಲಿ ಬಿ.ಎ.(1952) ಮತ್ತು
ಎಂ.ಎ. (1953) ಪದವಿಗಳನ್ನು ಪಡೆದ ಬಿಳಿಗಿರಿಯವರು, 1961 ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿನಲ್ಲಿ
ಅಧ್ಯಯನ ನಡೆಸಿ ಪಿಎಚ್.ಡಿ. ಪದವಿಯನ್ನು ಗಳಿಸಿದರು. ‘ಖಡಿಯಾ
ಭಾಷೆಯ ವರ್ಣನಾತ್ಮಕ ವ್ಯಾಕರಣ’ ಎನ್ನುವುದು ಅವರ ಸಂಶೋಧನೆಯ
ವಿಷಯ. ಅವರು, ಪುಣೆಯ ಡೆಕ್ಕನ್ ಕಾಲೇಜು ಮತ್ತು ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯಗಳಲ್ಲಿ,
ಭಾಷಾಶಾಸ್ತ್ರವನ್ನು ಕುರಿತ ವಿಶೇಷ ತರಬೇತಿಯನ್ನು ಪಡೆದರು. ಅವರು ಡೆಕ್ಕನ್ ಕಾಲೇಜಿನಲ್ಲಿ ಭಾಷಾಶಾಸ್ತ್ರದ
ರೀಡರ್ ಆಗಿಯೂ ಮೈಸೂರಿನ ‘ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ’(ಸಿ.ಐ.ಐ.ಎಲ್.) ನಲ್ಲಿ ಉಪ ನಿರ್ದೇಶಕರಾಗಿಯೂ(ಡೆಪ್ಯುಟಿ ಡೈರೆಕ್ಟರ್)
ಆಗಿಯೂ ಕೆಲಸ ಮಾಡಿದರು. ನಿವೃತ್ತರಾಗುವಾಗ, ಅವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ
ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಬಿಳಿಗಿರಿಯವರ ಬರವಣಿಗೆಯ ಒಂದು ಭಾಗವು ಕನ್ನಡ ಭಾಷೆಯ ಅಧ್ಯಯನಕ್ಕಾಗಿ
ಮೀಸಲಾಗಿದೆ. 1969 ರಲ್ಲಿ ಪ್ರಕಟವಾದ ‘ಆಲೋಕ
‘ವು ಕೇಶಿರಾಜನು ಬರೆದ ಪ್ರಾಚೀನ ಕನ್ನಡ ವ್ಯಾಕರಣವಾದ
‘ಶಬ್ದಮಣಿದರ್ಪಣ’ದ
ಅಧ್ಯಯನ. ಕನ್ನಡದ ಸಂದರ್ಭದಲ್ಲಿ, ಇದಕ್ಕೆ ವಿಶೇಷ ಮಹತ್ವವಿದೆ. ಹದಿಮೂರನೆಯ ಶತಮಾನದ ಈ ಕೃತಿಯನ್ನು
ಬಿಳಿಗಿರಿಯವರು ಆಧುನಿಕವಾದ ವರ್ಣನಾತ್ಮಕ ಭಾಷಾವಿಜ್ಞಾನ ಮತ್ತು ಐತಿಹಾಸಿಕ ಭಾಷಾವಿಜ್ಞಾನಗಳ ಬೆಳಕಿನಲ್ಲಿ
ಪರಿಶೀಲಿಸುತ್ತಾರೆ. ಅವರು ವಿಶ್ಲೇಷಣೆಯನ್ನು ಮಾಡುವರಾದರೂ, ತಪ್ಪು ಸರಿಗಳನ್ನು ಹೇರುವಂತೆ ಮಾತನಾಡುವುದಿಲ್ಲ.
ಈ ವ್ಯಾಖ್ಯಾನವು, ಕೇವಲ ಮೊದಲ 81 ಸೂತ್ರಗಳನ್ನು ಪರಿಶೀಲಿಸುತ್ತದೆ. ಆದ್ದರಿಂದಲೇ ಕೇಶಿರಾಜನು ಚರ್ಚಿಸುವ
ಎಲ್ಲ ವಿಷಯಗಳೂ ಅಧ್ಯಯನದ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೂ ಈ ಕೆಲಸವು, ಅನಂತರ ಡಿ.ಎನ್.ಶಂಕರ ಭಟ್
ಅವರು ನಡೆಸಿದ ಬಹಳ ಮೌಲಿಕವಾದ ಸಂಶೋಧನೆಗಳ ಪೂರ್ವಸೂಚನೆಯೆಂದು ಹೇಳಬಹುದು.
‘ವರ್ಣನಾತ್ಮಕ
ವ್ಯಾಕರಣದ ಮೂಲತತ್ವಗಳು’, ಹೊಸ ಬಗೆಯ ಅಧ್ಯಯನಗಳಿಗೆ
ಹಾದಿ ಮಾಡಿಕೊಟ್ಟ ಇನ್ನೊಂದು ಮುಂಚೂಣಿಯ ಕೃತಿ. ಈ ಕಿರು ಪುಸ್ತಕವು, ಧ್ವನಿ ವಿಜ್ಞಾನ, ಧ್ವನಿಮಾ ವಿಜ್ಞಾನ
ಮತ್ತು ಮುಖ್ಯವಾಗಿ ಆಕೃತಿಮಾ ಶಾಸ್ತ್ರಗಳ ಕೆಲವು ಮೂಲತತ್ವಗಳನ್ನು, ಬಹಳ ಸ್ಪಷ್ಟವೂ ಪಾರದರ್ಶಕವೂ ಆದ
ರೀತಿಯಲ್ಲಿ ಪರಿಚಯ ಮಾಡಿಕೊಡುತ್ತದೆ. ‘ವರಸೆಗಳು‘(1995), ಬಿಳಿಗಿರಿಯವರ ಬಿಡಿ ಲೇಖನಗಳ ಸಂಕಲನ. ಇದು ಭಾಷೆ, ಸಾಹಿತ್ಯ
ಮತ್ತು ಛಂದಸ್ಸುಗಳನ್ನು ಕುರಿತ ಹನ್ನೊಂದು ಸಂಶೋಧನ ಬರೆಹಗಳ ಸಂಕಲನ. ಇದರಲ್ಲಿ ಅಡಕವಾಗಿರುವ,
‘ಗಮಕ ಸಮಾಸ’
ಮತ್ತು ‘ಶ್ರೀ ಹರಿಚರಿತೆ’ಗಳನ್ನು(
ಪು.ತಿ.ನ. ಅವರ ಮಹಾಕಾವ್ಯ) ಕುರಿತ ಲೇಖನಗಳು ಬಹಳ ಮುಖ್ಯವಾದವು.
ಬಿಹಾರ್ ರಾಜ್ಯದ ಛೋಟಾ ನಾಗಪುರ್ ಪ್ರದೇಶದಲ್ಲಿ ಬಳಕೆಯಲ್ಲಿರುವ ಖಡಿಯಾ ಭಾಷೆಯ ವ್ಯಾಕರಣವನ್ನು ಪರಿಚಯಿಸುವ
ಅವರ ಪಿಎಚ್.ಡಿ. ಪ್ರಬಂಧವು ಪ್ರಕಟವಾಗಿದೆ. ಲೇಖನಗಳು ಮತ್ತು ಭಾಷಣಗಳು(ಪೇಪರ್ಸ್ ಅಂಡ್ ಟಾಕ್ಸ್) ಎನ್ನುವುದು
ಅವರ ಇಂಗ್ಲಿಷ್ ಲೇಖಲಗಳ ಸಂಕಲನವಾದರೂ ಅಲ್ಲಿರುವ ಅನೇಕ ಲೇಖನಗಳು ಕನ್ನಡವನ್ನು ಕುರಿತವು.
‘ನೇಸಲ್ ಫೊನೀಮ್ಸ್ ಆಫ್ ಕನ್ನಡ’,
‘ಕನ್ನಡ ವರ್ಬ್ಸ್’
ಮತ್ತು ‘ಕಾಂಜುಗೇಶನಲ್ ಸಿಸ್ಟೆಮ್ ಆಫ್ ಕನ್ನಡ’ ಎನ್ನುವುವು ಇಂತಹ ಲೇಖನಗಳಲ್ಲಿ ಕೆಲವು.
ಬಿಳಿಗಿರಿಯವರ ಪಾಂಡಿತ್ಯವು ಪಾರಂಪರಿಕ ಮತ್ತು ಆಧುನಿಕ ವಿದ್ವತ್ತುಗಳ
ಸಂಗಮವಾಗಿತ್ತು. ಪರಿಣಾಮವಾಗಿ ತಾನು ಆಯ್ದುಕೊಂಡ ವಿಷಯಗಳ ಮೇಲೆ ಹೊಸ ಬೆಳಕನ್ನು ಚೆಲ್ಲುವುದು ಅವರಿಗೆ
ಸಾಧ್ಯವಾಯಿತು. ಅವರ ಕೃತಿಗಳ ಸಂಕ್ಷಿಪ್ತವಾದ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:
- ಕನ್ನಡ
ಅ ‘ಆಲೋಕ’, ಭಾಗ-1, 1969, ಅಕ್ಷರ ಪ್ರಕಾಶನ, ಹೆಗ್ಗೋಡು.
ಆ. ‘ವರ್ಣನಾತ್ಮಕ
ವ್ಯಾಕರಣದ ಮೂಲತತ್ವಗಳು’, 1970, ಬೆಂಗಳೂರು ವಿಶ್ವವಿದ್ಯಾಲಯ,
ಬೆಂಗಳೂರು.
ಇ. ‘ವರಸೆಗಳು’, 1995, ಕನ್ನಡಸಂಘ, ಕ್ರೈಸ್ಟ್ ಕಾಲೆಜ್, ಬೆಂಗಳೂರು
ಈ. ‘ನಂದನ’, ಕವನ ಸಂಕಲನ
ಉ. ‘ನಾಯಿಕೊಡೆ’, ಕವನ ಸಂಕಲನ
- ಇಂಗ್ಲಿಷ್
ಅ. ‘ಪೇಪರ್ಸ್
ಅಂಡ್ ಟಾಕ್ಸ್’, ಸಿ.ಐ.ಐ.ಎಲ್., 1971, ಮೈಸೂರು
ಆ. ‘ಖಡಿಯಾ: ಫೊನಾಲಜಿ, ಗ್ರಾಮರ್ ಅಂಡ್ ವೊಕಾಬ್ಯುಲರಿ’, 1965,
ಡೆಕ್ಕನ್ ಕಾಲೆಜ್. ಪೂನಾ
|